ಉಪಯುಕ್ತ ಮಾಹಿತಿ

ನಮ್ಮ ಖುಷಿಗಳು ಎಲ್ಲಿವೆ. ಅವುಗಳನ್ನು ಹುಡುಕುವುದು ಹೇಗೆ. ಇನ್ನೂ ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ನಮ್ಮ ಖುಷಿಗಳು ಎಲ್ಲಿವೆ. ಅವುಗಳನ್ನು ಹುಡುಕುವುದು ಹೇಗೆ. ಏಕೆ ಎಲ್ಲವನ್ನೂ ನಾವು ಮರೆಯುತ್ತಾ ಹೋಗುತ್ತೇವೆ. ಹತ್ತಿರವಾದದ್ದು ನೀರಸವೂ ಹಾಗೂ ದೂರದಲ್ಲಿ ಇದ್ದದ್ದು ಆಕರ್ಷಣೆಯೂ ಆಗಿ ಕಾಣಿಸುತ್ತದೆ. ಸಾ’ವು ಯಾವತ್ತಿದ್ದರೂ ಭಯ ಮತ್ತು ಆಕರ್ಷಣೆ. ಬದುಕು ನಮ್ಮ ಜೊತೆಗಿದ್ದರೂ ಅಪರಿಚಿತ. ನಮಗೆ ನಾವು ಸ’ತ್ತ ಬದುಕಷ್ಟೇ ಗೊತ್ತು. ಅಂದರೆ ನಿನ್ನೆಗಳು ಮಾತ್ರ ಗೊತ್ತು. ಬದುಕುವ ಕ್ಷಣದ ಬಗ್ಗೆ ಗೊತ್ತಿಲ್ಲ ಅಂದರೆ ಬರಲಿರುವ ನಾಳೆಗಳ ಬಗ್ಗೆ ನಮಗೆ ಅರಿವಿಲ್ಲ.

ಹಾಗಾಗಿ ನಾಳೆಯ ಬಗ್ಗೆ ಆತಂಕವಿದೆ. ಅದನ್ನು ತಿಳಿದುಕೊಳ್ಳುವ ಆತುರವಿದೆ. ಈ ಕ್ಷಣವನ್ನು ನಾವು ಮರೆತುಬಿಡುತ್ತೇವೆ. ಹಾಗಿದ್ದರೆ ಹುಡುಕಾಟ ಎಂದರೆ ಏನು. ನಾವು ಸತತವಾಗಿ ಹುಡುಕುವುದು ಏನನ್ನು. ತಾನು ವಾಸಿಸುವುದಿಲ್ಲ ಎಂದು ಗೊತ್ತಿದ್ದರೂ ಏಕೆ ಕಾರ್ಮಿಕ ಮುಗಿಲೆತ್ತರದ ಮನೆ ಕಟ್ಟುತ್ತಾನೆ. ತಾನು ಸಾಯುತ್ತೇನೆ ಎಂದು ಗೊತ್ತಿದ್ದರೂ ಏಕೆ ಬದುಕನ್ನು ಕಟ್ಟುತ್ತಾನೆ. ಇವೆಲ್ಲದಕ್ಕೂ ಉತ್ತರವನ್ನು ಹುಡುಕುತ್ತಾ ಇಡೀ ವಿಶ್ವವನ್ನು ಸುತ್ತಿ ಬಂದರೂ ಮತ್ತೆ ಇದ್ದಲ್ಲೇ ಇರುತ್ತೇವೆ.

ಸ್ವಸ್ಥಾನಕ್ಕೆ ಬಂದು ಸೇರಿದರೆ ಮಾತ್ರ ತಿರುಗಾಟಕ್ಕೆ ಅರ್ಥ ಬರುವುದು. ಹೊರಟಲ್ಲಿಗೇ ಬರುವುದಾದರೆ ಹುಡುಕಾಟ ಏಕೆ ಬೇಕು. ತುಂಬಾ ಓದಿದವನು ಶೂನ್ಯ ಸಂಪಾದನೆ ಮಾಡುತ್ತಾನೆ. ಓದದವನದೂ ಶೂನ್ಯವೇ? ಆ ಶೂನ್ಯವೇ ಬೇರೆ ಮತ್ತು ಈ ಶೂನ್ಯವೇ ಬೇರೆ ಅಲ್ಲವೇ. ಇದು ಗೊತ್ತಾಗಬೇಕಾದರೆ ಎರಡೂ ಶೂನ್ಯಗಳನ್ನು ಸಹ ನೋಡಬೇಕು. ತುಂಬಾ ನಕ್ಕಾಗಲೇ ಸಹ ಕಣ್ಣೀರು ಬರುತ್ತದೆ. ಸತ್ತಾಗಲೂ ಸಹ ಕಣ್ಣೀರು ಬರುತ್ತದೆ. ಇವೆರಡನ್ನು ಅನುಭವಿಸಿದವನು ಮಾತ್ರ ಅದರ ವ್ಯತ್ಯಾಸವನ್ನು ತಿಳಿಯಬಲ್ಲ.

ಬದುಕು ಇರುವುದೇ ಹಾಗೆ. ಬದುಕು ಇರುವುದು ವಿಸ್ಮಯಗಳಲ್ಲಿ, ವಿಚಿತ್ರಗಳಲ್ಲಿ. ಸುಮ್ಮನೆ ಕೂತು ನೋಡಿದರೆ ಕಾಲ ಸರಿಯುತ್ತಿರುವುದು ಗೊತ್ತಾಗುತ್ತದೆ. ಅದಕ್ಕೆ ಗಡಿಯಾರ ಬೇಕಿಲ್ಲ. ಎಲ್ಲರ ಕಾಲವೂ ಒಂದೇ ಆಗಿರಬೇಕೆಂದರೆ ಗಡಿಯಾರ ಬೇಕು. ಎಲ್ಲರ ಸಮಯವು ಒಂದೇ ಏಕೆ ಆಗಿರಬೇಕು. ಎಲ್ಲರೂ ಒಂದೇ ಸಮಯದಲ್ಲಿ ಒಂದೇ ಕೆಲಸ ಏಕೆ ಮಾಡಬೇಕು. ಏಕಕಾಲಕ್ಕೆ ಎಲ್ಲರೂ ಒಂದೇ ರೀತಿ ಯೋಚಿಸುತ್ತಿದ್ದರೆ ಮಧ್ಯಮವರ್ಗ ಸೃಷ್ಟಿಯಾಗುತ್ತದೆ.

ಎಂಟೂವರೆಗೆ ಸರಿಯಾಗಿ ಶಾಲೆಗೆ ಮತ್ತು ಒಂದು ವರೆಗೆ ಸರಿಯಾಗಿ ಮನೆಗೆ, ಹತ್ತು ಗಂಟೆಗೆ ಸರಿಯಾಗಿ ಕಚೇರಿಗೆ ಮತ್ತು ಐದೂವರೆಗೆ ಸರಿಯಾಗಿ ಮನೆಗೆ. ಎಲ್ಲವೂ ಕಾಲ ನಿಯಾಮಕ. ಸಾಮಾಜಿಕ ಕಾಲವನ್ನು ಮೀರುವುದು ಕಷ್ಟ. ಆರೋಗ್ಯ, ಮನಸ್ಥಿತಿ, ಉಲ್ಲಾಸ, ಉತ್ಸಾಹಗಳೆಲ್ಲ ವ್ಯವಸ್ಥೆಯಲ್ಲಿ ಅರ್ಥಹೀನ ಪದಗಳು. ಯಾವ ವ್ಯಕ್ತಿಯು ತನ್ನ 60ರ ಮುಂಜಾನೆಯನ್ನು ತಲುಪುತ್ತಾನೆ ಅವನಿಗೆ ನಿವೃತ್ತಿ.

ಇವೆಲ್ಲದರ ನಡುವೆ ಬದುಕು ಎಲ್ಲಿದೆ. ನಾವೇನನ್ನು ಹುಡುಕುತ್ತಿದ್ದೇವೆ. ಈ ಜಗಳಗಳು, ಕದನಗಳು ಏಕೆ. ಹೊಸವರ್ಷದ ಹೊಸಿಲಲ್ಲಿ ಇದ್ದರೂ ಹಳೆ ವರ್ಷದ ನೆನಪುಗಳು. ಈ ನೆನಪುಗಳು ಕನಸುಗಳ ನಡುವೆ ಗಡಿಯಾರದ ಪೆಂಡುಲಂ ನ ಹಾಗೆ ಜೀಕುವ ಮನಸ್ಸನ್ನು ಒಂದೆಡೆ ನಿಲ್ಲಿಸಿದರೆ ಎಲ್ಲವೂ ಸ್ತಬ್ಧ.

Leave a Reply

Your email address will not be published. Required fields are marked *